1 ಲಕ್ಷ ರೈತರಿಗೆ ಕೃಷಿಭಾಗ್ಯ ಸಮರ್ಪಣೆ

ಕೊಪ್ಪಳ: ಕೃಷಿಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ನಿರ್ಮಿಸಲಾಗಿರುವ 1 ಲಕ್ಷ ಕೃಷಿ ಹೊಂಡಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ರೈತರಿಗೆ ಸಮರ್ಪಿಸಿದ್ದಾರೆ.

ಕೊಪ್ಪಳದಲ್ಲಿ ಸೋಮವಾರ ಕೃಷಿಭಾಗ್ಯ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಯೋಜನೆ ಸಮರ್ಪಣೆ ಹಾಗೂ
ಸ್ವಾವಲಂಬಿ-ಸ್ವಾಭಿಮಾನಿ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕದ 12 ಜಿಲ್ಲೆಗಳ
ಸುಮಾರು 20 ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸಮಾವೇಶ ಉದ್ಘಾಟಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡ 1 ಲಕ್ಷ ರೈತರ ಘಟಕಗಳಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರದಿಂದ ತೊಂದರೆ ಅನುಭವಿಸಿದ ರೈತರ ಸಹಕಾರಿ ಸಂಸ್ಥೆಗಳಲ್ಲಿನ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದೇವೆ. ಸಾಲ ವಸೂಲಾತಿ ಅವಧಿಯನ್ನು ಒಂದು ವರ್ಷದವರೆಗೆ ಮುಂದೂಡಿದ್ದೇವೆ. ಬಡ್ಡಿ ಇಲ್ಲದೆ 3 ಲಕ್ಷದವರೆಗೆ ಸಾಲ ನೀಡುತ್ತಿದ್ದೇವೆ. ಪ್ರಸ್ತುತ ವರ್ಷ 23 ಲಕ್ಷ ರೈತರಿಗೆ ಸಾಲ ನೀಡಲಾಗಿದೆ. ಸ್ವಸಹಾಯ ಸಂಘಗಳಿಗೆ 10 ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದರು.

ಇದೇ ವೇಳೆ, ಕೃಷಿ ಭಾಗ್ಯ ಯೋಜನೆಯ ಯಶಸ್ಸು ಕುರಿತಂತೆ ವಾರ್ತಾ ಇಲಾಖೆ ತಯಾರಿಸಿರುವ ಕೃಷಿ ಭಾಗ್ಯ-
ಸಾಕ್ಷéಚಿತ್ರದ ಸಿಡಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ವಾರ್ತಾ ಇಲಾಖೆ, ಕೃಷಿ ಇಲಾಖೆಯ ಸಹಯೋಗದಲ್ಲಿ
ರೈತರಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಮಡಿಕೆ ಪತ್ರವನ್ನು ರೈತರಿಗೆ
ವಿತರಿಸಿದರು.

ಸಮಾವೇಶದಲ್ಲಿ ಮಾತನಾಡಿದ ಕೃಷ್ಣ ಭೈರೇಗೌಡ, ಕೃಷಿಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ರೈತರು 1 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡಿದ್ದು, 5 ಲಕ್ಷ ಹೆಕ್ಟೇರ್‌ ಒಣಭೂಮಿಗೆ ಅನುಕೂಲವಾಗಲಿದೆ.

ರೈತರು ಸ್ವಾಭಿಮಾನಿ ಹಾಗೂ ಸ್ವಾವಲಂಬಿಯಾಗಿ ಬದುಕಲು ಕೃಷಿ ಹೊಂಡಕ್ಕೆ ಆದ್ಯತೆ ನೀಡಲಾಗಿದೆ. ಮಳೆ ಬಂದಾಗ ನೀರು ಸಂಗ್ರಹಿಸಿಟ್ಟುಕೊಂಡರೆ ಕಡಿಮೆ ನೀರಲ್ಲಿ ಬೆಳೆ ಬೆಳೆದು ಸ್ವಾವಲಂಬಿಗಳಾಗಬಹುದು. ರೈತ ಸ್ವಾವಲಂಬಿಯಾದರೆ ಸರ್ಕಾರದ ಮುಲಾಜು ಬೇಕಿಲ್ಲ. ಸ್ವಂತ ದುಡಿಮೆಯಲ್ಲಿ ತೊಡಗಬಹುದು ಎಂದರು.

ಭತ್ತ ನಾಟಿ ಮಾಡಿದ ಕೃಷಿ ಸಚಿವ: ಈ ಮಧ್ಯೆ, ಸೋಮವಾರ ಬೆಳಗ್ಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಕೊಪ್ಪಳ ತಾಲೂಕು ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಆಗಮಿಸಿದ ಸಿದ್ದರಾಮಯ್ಯ, ಬಳಿಕ, ಕೊಪ್ಪಳ ತಾಲೂಕಿನ ಟಣಕನಕಲ್‌ ಗ್ರಾಮಕ್ಕೆ ತೆರಳಿ, ಕೃಷಿ ಹೊಂಡ ಹೊಂದಿದ ರೈತರ ಜಮೀನುಗಳಿಗೆ ಭೇಟಿ ನೀಡಿದರು. ಕೃಷಿ ಹೊಂಡ ವೀಕ್ಷಿಸಿ, ರೈತರೊಂದಿಗೆ ಸಂವಾದ ನಡೆಸಿದರು.

ಬಳಿಕ, ಕೃಷಿ ಇಲಾಖೆಗೆ ಭೇಟಿ ನೀಡಿ, ಇಲಾಖೆ ಆಯೋಜಿಸಿದ್ದ ಭತ್ತ ನಾಟಿ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಈ ವೇಳೆ, ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಯಂತ್ರಧಾರೆ ಮೂಲಕ ಭತ್ತ ನಾಟಿ ಮಾಡಿದರು. ಆ ಮೂಲಕ ಭತ್ತ ನಾಟಿ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಿದರು. ಸಿದ್ದರಾಮಯ್ಯ, ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಸಾಥ್‌ ನೀಡಿದರು. ಇದೇ ವೇಳೆ, ಕೃಷಿ ಸುಧಾರಣೆಯ ಪ್ರಾತ್ಯಕ್ಷಿಕೆಯನ್ನು ರೈತರಿಗೆ ನೇರವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

http://www.udayavani.com/kannada/news/state-news/166322/1-lakh-farmers-dedication-krsibhagya#