ಸ್ಟಾರ್‌ ಹೋಟೆಲ್ಲಲ್ಲಿ ರಾಗಿಮುದ್ದೆ ಸಿಕ್ಕರೆ ರೈತರಿಗೆ ಲಾಭವಿಲ್ಲ

Krishna-Byregowda-15

 

ವಿಧಾನಪರಿಷತ್‌: ಪಂಚತಾರಾ ಹೋಟೆಲ್‌ಗ‌ಳಲ್ಲಿ ರಾಗಿಮುದ್ದೆ ಸಿಗುವಂತೆ ಮಾಡಿದಾಕ್ಷಣ ರಾಗಿ ಬೆಳೆದ ರೈತರ ಬದುಕು ಹಸನಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಕೃಷಿ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರೈತರ ಆತ್ಮಹತ್ಯೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್‌ನ ಜಯಮ್ಮ ಬಾಲರಾಜ್‌ ಮಾತನಾಡುವಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಗೋ.ಮಧುಸೂದನ್‌ “ಜನತಾದಳದವರಿಗೆ ರಾಗಿ ಬೆಳೆಯುವ ರೈತರ ಬಗ್ಗೆ ಕಾಳಜಿ ಇಲ್ಲ ಅಂತ ಭಾವಿಸಬೇಡಿ. ಏಕೆಂದರೆ, ಆ ಪಕ್ಷದ ರಾಷ್ಟ್ರೀಯ ನಾಯಕರು (ಎಚ್‌.ಡಿ. ದೇವೇಗೌಡ) ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿತ್ತು. ಆಗ ಎಲ್ಲ ಪಂಚತಾರಾ ಹೋಟೆಲ್‌ಗ‌ಳಲ್ಲಿ ರಾಗಿ ಮುದ್ದೆ ಸಿಗುತ್ತಿತ್ತು ಎಂದು ಕಾಲೆಳೆದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷ್ಣಬೈರೇಗೌಡ, ಪಂಚತಾರಾ ಹೋಟೆಲ್‌ಗ‌ಳಲ್ಲಿ ರಾಗಿ ಮುದ್ದೆ ಸಿಗುತ್ತದೆ ಎಂದಾಕ್ಷಣ ರಾಗಿ ಬೆಳೆಗಾರರ ಬದುಕು ಹಸನಾಗುತ್ತದೆ, ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಭಾವಿಸಬೇಕಾಗಿಲ್ಲ. ಕೇವಲ ಕಬ್ಬು ಬೆಳೆಗಾರರ ಬಗ್ಗೆ ಮಾತನಾಡುವವರು ರಾಗಿ ಮತ್ತು ಜೋಳದ ಬೆಳೆಗಾರರ ಬಗ್ಗೆಯೂ ಕಾಳಜಿ ತೋರಿಸಲಿ ಎಂದು ಪರೋಕ್ಷವಾಗಿ ಜೆಡಿಎಸ್‌ ನಾಯಕರ ಧೋರಣೆ ಟೀಕಿಸಿದರು.

ಇದಕ್ಕೊ ಮೊದಲು ಜಯಮ್ಮ ಬಾಲರಾಜ್‌ ಮಾತನಾಡುತ್ತ, ಸದನದ ಬಹುತೇಕ ಸದಸ್ಯರು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆದರೆ ರಾಗಿ ಮತ್ತು ಜೋಳ ಬೆಳೆಯುವ ರೈತರ ಸಂಕಷ್ಟಗಳ ಬಗ್ಗೆ ಯಾರೂ ಮಾತನಾಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮಧ್ಯಪ್ರವೇಶಿಸಿದ ಜೆಡಿಎಸ್‌ ನಾಯಕ ಬಸವರಾಜ್‌ ಹೊರಟ್ಟಿ “ಹಳ್ಳಿಯಿಂದ ಬಂದ ಒಬ್ಬ ಹೆಣ್ಣು ಮಗಳು ಇಷ್ಟು ಚೆನ್ನಾಗಿ ಮಾತನಾಡುತ್ತಿರುವಾಗ ಅವರ ಮಾತು ಕೇಳ್ಳೋರು ಯಾರೂ ಇಲ್ಲ. ಮುಂದಿನ ಸಾಲಿನಲ್ಲಿ ಸಚಿವರಿಬ್ಬರು ಹರಟೆ ಹೊಡೆಯುತ್ತ ಕುಳಿತಿದ್ದಾರೆ ಎಂದು ಸಚಿವರಾದ ಬಾಬುರಾವ್‌ ಚಿಂಚನಸೂರು ಮತ್ತು ಪರಮೇಶ್ವರ್‌ ನಾಯಕ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ನಾನು ಪ್ರತಿನಿತ್ಯ ರಾಗಿಮುದ್ದೆ ತಿನ್ನುತ್ತೇನೆ: ಈ ವೇಳೆ ಮಧ್ಯಪ್ರವೇಶಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ, “ಸದಸ್ಯರ ಮಾತುಗಳನ್ನು ನಾನು ಕೇಳುತ್ತಿದ್ದೇನೆ. ಉಳಿದ ಸಚಿವರು ಮತ್ತು ಆಡಳಿತ ಪಕ್ಷದ ಎಲ್ಲ ಸದಸ್ಯರು ಬಹಳ ಗಂಭೀರವಾಗಿ ಕೇಳುತ್ತಿದ್ದಾರೆ. ಸದನದಲ್ಲಿನ ಚರ್ಚೆ ಕೇಳಬೇಕು ಎನ್ನುವುದು ನಿಮಗೂ ಅನ್ವಯಿಸುತ್ತದೆ. ಕಬ್ಬು ಬೆಳೆಗಾರರ ಬಗ್ಗೆ ಮಾತನಾಡುವವರು ಸ್ವಲ್ಪ ರಾಗಿ ಮತ್ತು ಜೋಳ ಬೆಳೆಯುವ ರೈತರ ಬಗ್ಗೆಯೂ ಮಾತನಾಡಬೇಕು’ ಎಂದು ಹೊರಟ್ಟಿಯವರಿಗೆ ತಿರುಗೇಟು ನೀಡಿದರು. ಮಧ್ಯೆ ಪ್ರವೇಶಿಸಿದ ಗೋ.ಮಧುಸೂದನ್‌ ರಾಗಿ ಬಗ್ಗೆ ಜೆಡಿಎಸ್‌ ನಾಯಕರಿಗೆ ಕಾಳಜಿ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ. ಏಕೆಂದರೆ ಆ ಪಕ್ಷದ ರಾಷ್ಟ್ರೀಯ ನಾಯಕರ ಅವಧಿಯಲ್ಲಿ ರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿತ್ತು. ಆಗ ಪಂಚಾತಾರ ಹೋಟೆಲ್‌ಗ‌ಳಲ್ಲಿ ರಾಗಿ ಮುದ್ದೆ ಸಿಗುತ್ತಿತ್ತು ಎಂದು ಛೇಡಿಸಿದರು. ರಾಗಿ ಬಗ್ಗೆ ನಿಮಗೆ ಗೊತ್ತಿಲ್ಲ ಬಿಡಿ ಎಂದು ಕೃಷ್ಣಬೈರೇಗೌಡ ಹೇಳಿದಾಗ, ನಮ್ಮ ತಾತ, ತಂದೆ ರಾಗಿ ಮುದ್ದೆ ತಿಂದವರು. ಈಗ ನಾನು ಪ್ರತಿನಿತ್ಯ ರಾಗಿಮುದ್ದೆ ತಿನ್ನುತ್ತೇನೆ. ಏಕೆಂದರೆ ಮೂವರೂ “ಶುಗರ್‌ ಪೇಷಂಟ್‌’ ಎಂದು ಹಾಸ್ಯವಾಡಿದರು.

ರಾಗಿ, ಜೋಳ ಬೆಳೆದವರು ಆತ್ಮಹತ್ಯೆ ಮಾಡಿಕೊಂಡಿಲ್ಲ: ರಾಗಿ ಮತ್ತು ಜೋಳ ಬೆಳೆದ ರೈತರು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸದನದಲ್ಲಿ ಇವರ ಬಗ್ಗೆ ಯಾರೇ ಮಾತಾಡಲಿ, ಬಿಡಲಿ ಕಾಂಗ್ರೆಸ್‌ ಸರ್ಕಾರ ರಾಗಿ ಮತ್ತು ಜೋಳ ಬೆಳೆಯುವ ರೈತರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದೆ. ರಾಗಿ ಮತ್ತು ಜೋಳ ಬೆಳೆಯುವ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿಯೇ ಕಳೆದ ವರ್ಷ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಶೇ. 30ರಷ್ಟು ಹೆಚ್ಚು ಸಹಾಯಧನ ನೀಡಿ ರೈತರಿಂದ ರಾಗಿ ಮತ್ತು ಜೋಳ ಖರೀದಿಸಲಾಗಿದೆ. ಈ ವರ್ಷವೂ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸಲಿ, ಬಿಡಲಿ ರಾಜ್ಯ ಸರ್ಕಾರದಿಂದ ಶೇ. 30 ರಿಂದ 40ರಷ್ಟು ಹೆಚ್ಚು ಸಬ್ಸಿಡಿ ಕೊಟ್ಟು ರಾಜ್ಯದ ರೈತರಿಂದ ರಾಗಿ ಮತ್ತು ಜೋಳ ಖರೀದಿಸಲಾಗುವುದು ಎಂದು ಕೃಷಿ ಸಚಿವರು ಇದೇ ವೇಳೆ ತಿಳಿಸಿದರು.