ರೈತರಿಗೆ ಕೃಷಿ ಹೊಂಡದ ಜತೆಗೆ ಪಂಪ್‌ಸೆಟ್‌

ಒಣ ಬೇಸಾಯ ಆಶ್ರಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಕೃಷಿ ಭಾಗ್ಯ ಇದೀಗ ಮತ್ತಷ್ಟು ಸೇವೆಗಳೊಂದಿಗೆ ಸಮಗ್ರ ಪ್ಯಾಕೇಜ್‌ ಯೋಜನೆಯಾಗಿ ಮಾರ್ಪಟ್ಟಿದೆ.

ಮಳೆ ನೀರು ಸಂಗ್ರಹಿಸಲು ಹೊಂಡ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದ್ದ ಕೃಷಿ ಭಾಗ್ಯ ಯೋಜನೆಯಡಿ ಇದೀಗ ಬದುಗಳ ನಿರ್ಮಾಣ, ಜಮೀನು ಹದ ಮಾಡುವುದು, ಹೊಲಕ್ಕೆ ನೀರು ಹಾಯಿಸಲು ಡೀಸೆಲ್‌ ಮೋಟಾರ್‌ಪಂಪ್‌ ಹಾಗೂ ಹನಿ ನೀರಾವರಿ ಉಪಕರಣದಂತಹ ಸೌಲಭ್ಯಗಳನ್ನು ಸರ್ಕಾರ ನೀಡಲಿದ್ದು, ಪ್ರತಿ ಘಟಕಕ್ಕೆ 1.50 ಲಕ್ಷ ರೂ.(ಗರಿಷ್ಠ ಮೊತ್ತ) ವೆಚ್ಚ ಮಾಡಲಿದೆ.

ಈ ನೂತನ ಯೋಜನೆಯನ್ನು ರೈತರಿಗೆ ಸಮರ್ಪಿಸಲು ಆಗಸ್ಟ್‌ 29 ರಂದು ಕೊಪ್ಪಳದಲ್ಲಿ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಮಾವೇಶ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ, ನೀರಾವರಿ ವ್ಯಾಪ್ತಿಯಲ್ಲಿ ಇಲ್ಲದ 25 ಜಿಲ್ಲೆಗಳ 131 ತಾಲೂಕುಗಳ ಒಣ ಬೇಸಾಯ ಆಶ್ರಿತ ರೈತರಿಗೆ ಕನಿಷ್ಠ ಒಂದು ಬೆಳೆಯಾದರೂ ಕೈಗೆ ಸಿಗುವಂತೆ ಮಾಡುವ ಉದ್ದೇಶದಿಂದ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಮತ್ತಷ್ಟು ಸೌಲಭ್ಯಗಳೊಂದಿಗೆ ಸಮಗ್ರ ಪ್ಯಾಕೇಜ್‌ನಡಿ ಜಾರಿ ಮಾಡುತ್ತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಯೋಜನೆಯ ಪ್ರಯೋಜನ ಪಡೆದ ರೈತರ ಯಶೋಗಾಥೆಗಳ ಕಿರುಹೊತ್ತಿಗೆ ಬಿಡುಗಡೆ ಜೊತೆಗೆ ಹೈಟೆಕ್‌ ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಹಾಗೂ ಮಾದರಿ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸಮಗ್ರ ಪ್ಯಾಕೇಜ್‌ ಯೋಜನೆಯು ಒಂದು ಲಕ್ಷ ಫ‌ಲಾನುಭವಿಗಳನ್ನು ತಲುಪಲಿದೆ. ಈ ಯೋಜನೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ರೈತರು ಸ್ಪಂದಿಸಿದ್ದು ಆ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ನೀರಾವರಿ ಪ್ರದೇಶಕ್ಕೆ ವಾರ್ಷಿಕ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದು ಒಣ ಬೇಸಾಯ ಪ್ರದೇಶಕ್ಕೆ ಕಡಿಮೆ ಖರ್ಚು ಮಾಡಲಾಗುತ್ತಿದೆ. ಹೀಗಾಗಿ, ಒಣ ಬೇಸಾಯ ಪ್ರದೇಶಕ್ಕೆ ಹೆಚ್ಚು ಆದ್ಯತೆ ನೀಡುವುದು ನಮ್ಮ ಗುರಿಯಾದ್ದರಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪಾಲಿ ಹೌಸ್‌ ಯೋಜನೆ ಜಾರಿ:
ಇದೇ ಯೋಜನೆಯಡಿ ಪಾಲಿಹೌಸ್‌ (ನೆರಳು ಪರದೆ) ಯೋಜನೆಯನ್ನೂ ಜಾರಿಗೊಳಿಸಲಾಗಿದ್ದು, ಪ್ರತಿ ಘಟಕಕ್ಕೆ ಪ್ರತಿ ಎಕರೆಗೆ 30 ಲಕ್ಷ ರೂ. ವೆಚ್ಚವಾಗಲಿದೆ. ಸರ್ಕಾರ ಸಾಮಾನ್ಯ ವರ್ಗಕ್ಕೆ ಶೇ.50 ರಷ್ಟು ಸಬ್ಸಿಡಿ ನೀಡಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.90 ರಷ್ಟು, ನಾಲ್ಕು ವರ್ಷ ಸತತ ಬರಗಾಲ ಎದುರಿಸದ ತಾಲೂಕುಗಳಿಗೆ ಶೇ.70 ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ತಿಳಿಸಿದರು.
ಪಾಲಿಹೌಸ್‌ ಯೋಜನೆಯಲ್ಲಿ ಶೇ.50 ರಷ್ಟು ಕಡಿಮೆ ನೀರು, ಶೇ.60 ರಷ್ಟು ಕಡಿಮೆ ಕೂಲಿಕಾರರ ಅಗತ್ಯತೆ ಬೀಳುತ್ತದೆ. ಆದರೆ, ಇಳುವರಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ರೋಗ ರುಜಿನಗಳ ಸಮಸ್ಯೆಯೂ ಇರದು. ಈ ಯೋಜನೆಯಡಿ 2400 ರೈತ ಕುಟುಂಬಗಳು ಪ್ರಯೋಜನ ಪಡೆದಿದ್ದು ಇದನ್ನೂ ಸೋಮವಾರ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.

ಉತ್ತರ ಕರ್ನಾಟಕವಷ್ಟೇ ಅಲ್ಲದೆ ಹಳೇ ಮೈಸೂರು ಭಾಗದ ಕೋಲಾರ ಸೇರಿ ಇತರೆ ಜಿಲ್ಲೆಗಳಲ್ಲೂ ಕೃಷಿಭಾಗ್ಯ ಯೋಜನೆಗೆ ರೈತರನ್ನು ಆಯ್ಕೆ ಮಾಡಲಾಗಿದೆ. ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿದ ನಂತರ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಕೃಷಿ ಭಾಗ್ಯ ಯೋಜನೆಯಡಿ 1051 ಕೋಟಿ ರೂ. ನೆರವು ಒದಗಿಸಿದ್ದು, 900 ಕೋಟಿ ರೂ.ವರೆಗೆ ವೆಚ್ಚ ಮಾಡಲಾಗಿದೆ. ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಡುವ ಘಟನೆಗಳು ನಡೆಯುತ್ತಿದ್ದು, ಹೊಂಡದ ಸುತ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲು ರೈತರಿಗೆ ಮನವಿ ಮಾಡಲಾಗಿದೆ. ಸರ್ಕಾರದ ವತಿಯಿಂದಲೂ ಇದಕ್ಕೆ ನೆರವು ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಶೇಕಡ 70 ರಷ್ಟು ಪ್ರದೇಶವು ಒಣ ಬೇಸಾಯ ಆಧಾರಿತವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬೆಳೆಗೆ ಹಾನಿಯಾಗುತ್ತಿರುವುದರಿಂದ ಈ ಬೇಸಾಯದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಇಂತಹ ರೈತರ ಸಮಸ್ಯೆಗೆ ಪರಿಹಾರ ನೀಡಬೇಕೆಂಬ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮತ್ತು ಪಾಲಿಹೌಸ್‌ ನಿರ್ಮಿಸಿಕೊಳ್ಳಲು ಸರ್ಕಾರ ನೆರವು ನೀಡುತ್ತಿದೆ. ಜಮೀನಿನಲ್ಲಿ ಬಿದ್ದ ಮಳೆ ನೀರು ಹರಿದು ವ್ಯರ್ಥವಾಗದಂತೆ, ಜಮೀನಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ನೀರನ್ನು ಸಂಗ್ರಹಿಸಿಟ್ಟುಕೊಂಡು ಬೆಳೆಗಳಿಗೆ ಉಪಯೋಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈ ಪ್ಯಾಕೇಜ್‌ನಿಂದ ಪ್ರತಿ ರೈತರು ಕನಿಷ್ಠ 3 ರಿಂದ 8 ಎಕರೆ ಪ್ರದೇಶದ ಬೆಳೆಗೆ ನೀರನ್ನು ಬಳಸಿಕೊಳ್ಳಬಹುದಾಗಿದೆ. ಪಾಲಿಹೌಸ್‌ ಘಟಕದಿಂದಲೂ ರೈತರಿಗೆ ಬಹಳ ಅನುಕೂಲಗಳಿದ್ದು, ಪ್ರಮುಖವಾಗಿ ಹೂವು ಮತ್ತು ತರಕಾರಿಗಳನ್ನು ಬೆಳೆದು ರೈತರು ತಿಂಗಳಿಗೆ 50 ರಿಂದ 60 ಸಾವಿರ ರೂ. ಆದಾಯ ಪಡೆಯಬಹುದಾಗಿ. ಪಾಲಿಹೌಸ್‌ ಮೇಲೆ ಬಿದ್ದ ಮಳೆ ನೀರನ್ನು ಕೂಡ ಶೇಖರಿಸಿಟ್ಟುಕೊಳ್ಳುವುದರಿಂದ 9 ತಿಂಗಳ ಮಟ್ಟಿಗೆ ಬೆಳೆೆಯನ್ನು ಸುಧಾರಿಸಬಹುದು ಎಂದು ಹೇಳಿದರು.

ಸಮಾರಂಭದಲ್ಲಿ ಯೋಜನೆಯ ಪ್ರಯೋಜನ ಪಡೆದ ರೈತರ ಯಶೋಗಾಥೆಗಳ ಕಿರುಹೊತ್ತಿಗೆ ಬಿಡುಗಡೆ ಜೊತೆಗೆ ಹೈಟೆಕ್‌ ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಹಾಗೂ ಮಾದರಿ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

http://www.udayavani.com/kannada/news/state-news/166059/in-addition-farmers-in-the-farm-pond-pump?utm_campaign=datomata&utm_medium=similiar&utm_source=datomata&datomata_kw=%20