ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 774 ಮಂದಿ ವಿರುದ್ಧ ಪ್ರಕರಣ ದಾಖಲು: ಕೃಷ್ಣ ಬೈರೇಗೌಡ

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 774 ಮಂದಿ ವಿರುದ್ಧ ಕಳೆದ ಒಂದು ವಾರದಲ್ಲಿ ಪ್ರಕರಣ ದಾಖಲಿಸಿದ್ದು, 580 ಜನರನ್ನು ಬಂಧಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಾಂಗ್ರೆಸ್‌ನ ಟಿ.ಜಾನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಗಂಭೀರವಾಗಿ ಕ್ರಮ ಜರುಗಿಸಲಾಗುತ್ತಿದ್ದು, ಒಂದೇ ವಾರದಲ್ಲಿ 580 ಜನರನ್ನು ಬಂಧಿಸಲಾಗಿದೆ.

ಅಷ್ಟೇ ಅಲ್ಲದೆ, ಇಂತಹ ಮೀಟರ್ ಬಡ್ಡಿದಾರರನ್ನು ಪತ್ತೆ ಮಾಡುವ ಕಾರ್ಯ ಜಿಲ್ಲಾಡಳಿತಗಳ ಮೂಲಕ ಮುಂದುವರೆದಿದ್ದು, ರೈತರ ನೆರವಿಗೆ ಸರ್ಕಾರ ಧಾವಿಸುತ್ತಿದೆ ಎಂದು ಭರವಸೆಯ ಮಾತನಾಡಿದರು.

ರೈತರೊಂದಿಗೆ ಸರ್ಕಾರ

ಈವರೆಗೆ 9,900 ಕೋಟಿ ರೂ.ಗಳಷ್ಟು ಸಾಲವನ್ನು ಬಡ್ಡಿರಹಿತವಾಗಿ ನೀಡಿದ್ದು, ಎಲ್ಲ ಸಂದರ್ಭಗಳಲ್ಲಿಯೂ ರೈತರ ಹಿತದೃಷ್ಟಿ ಕಾಯಲಾಗುತ್ತಿದೆ. ಕೃಷಿಕ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಎಲ್ಲ ಹಂತದಲ್ಲಿಯೂ ಸರ್ಕಾರ ನಿರ್ವಹಿಸಿದೆ ಎಂದು ಸಮರ್ಥಿಸಿಕೊಂಡರು.

ಇದಲ್ಲದೆ, ಜಿಲ್ಲಾಡಳಿತ ಕೂಡ ರೈತರ ಸಮಸ್ಯಗಳಿಗೆ ತ್ವರಿತವಾಗಿ ಸ್ಪಂದಿಸಲು ಸೂಚಿಸಲಾಗಿದ್ದು, ಅದರಂತೆ ಎಲ್ಲ ಸಂದರ್ಭಗಳಲ್ಲೂ ರೈತರ ನೆರವಿಗಿರುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

ವಿಶೇಷ ತಂಡ ರಚನೆ

ಇನ್ನು ಬಿಜೆಪಿಯ ರಘುನಾಥ್ ಮಲ್ಕಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ರೈತರ ಬಾಕಿ ಸಾಲದ ಕುರಿತಾಗಿ ಸೂಚನಾ ಫಲಕದಲ್ಲಿ ಭಾವಚಿತ್ರವನ್ನು ಪ್ರಕಟಿಸಿದ ಘಟನೆ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಮುಂಚೆಯೇ ಸರ್ಕಾರದ ಗಮನಕ್ಕೆ ಬಂದಿದೆ. ಸೋಮವಾರವೇ ಉಪವಿಭಾಗಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಶೀಘ್ರದಲ್ಲಿ ವರದಿ ಪಡೆಯಲಾಗುವುದೆಂದು ತಿಳಿಸಿದರು.

ಉಪವಿಭಾಗಾಧಿಕಾರಿ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಪೊಲೀಸ್ ರನ್ನೊಳಗೊಂಡು ಈ ತಂಡ ರಚನೆಯಾಗಿದ್ದು, ಸೋಮವಾರವೇ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಗಮನಕ್ಕೆ ತರುತ್ತಿದ್ದಂತೆ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ನುಡಿದರು.

  • ಜಿಲ್ಲಾಡಳಿತದ ಮೂಲಕ ಪತ್ತೆ ಮಾಡುವ ಕಾರ್ಯಾಚರಣೆ
  • ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ
  • ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಕೃಷಿ ಸಚಿವರು

https://www.erelego.com/eNewspaper/newspaper.php?paperedition=Bengaluru&papername=Hosadigantha#