ಮೂರು ದಿನಗಳ ಜಲ ಸಭೆ : ಧಾರವಾಡ

ಪ್ರಜಾವಾಣಿ ವಾರ್ತೆ

ಧಾರವಾಡ: ‘ಹೆಚ್ಚು ಪೌಷ್ಟಿಕಾಂಶವುಳ್ಳ ಕಿರುಧಾನ್ಯಗಳನ್ನು ಹೆಚ್ಚು ಉತ್ತೇಜಿಸು­ವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕೃಷಿ ವಿಶ್ವವಿದ್ಯಾಲಯ ಆಯೋಜಿಸಿ­ರುವ ಮೂರು ದಿನಗಳ ಜಾಗತಿಕ ಜಲ ಸಭೆ, ಕೃಷಿ ದೃಷ್ಟಿಕೋನದಿಂದ ಬದಲಾದ ಹವಾಗುಣಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆ ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದರಿಂದ ಒಣಹವೆ ಹಾಗೂ ಬರಗಾಲ ಇನ್ನು ಸಾಮಾನ್ಯ ಎಂಬ ಸಂಗತಿಯನ್ನು ವಿಜ್ಞಾನಿಗಳು ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಬರ ನಿರೋಧಕ ಹಾಗೂ ಹೆಚ್ಚು ಪೌಷ್ಟಿಕಾಂಶವುಳ್ಳ ಕಿರುಧಾನ್ಯಗಳ ಹೆಚ್ಚು ಜನಪ್ರಿಯಗೊಳಿಸುವುದು ಸದ್ಯದ ಅಗತ್ಯ. ಹಸಿರುಕ್ರಾಂತಿಯ ನಂತರ ಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇಂದು ಪೌಷ್ಟಿಕಾಂಶವುಳ್ಳ ಧಾನ್ಯಗಳ ಅಗತ್ಯ ಹೆಚ್ಚಾಗಿದೆ’ ಎಂದರು.

‘ಅತಿ ಹೆಚ್ಚು ನೀರಿನ ಅಗತ್ಯವಿರುವ ಭತ್ತ ಹಾಗೂ ಕಬ್ಬಿನ ತಳಿಯಲ್ಲಿ ಸುಧಾರಿತ ಕೃಷಿ ಪದ್ಧತಿ ಅಳವಡಿಸಿ, ನೀರು ಬಳಕೆಯ ಪ್ರಮಾಣ ಕಡಿಮೆ ಮಾಡುವತ್ತ ಚಿಂತನೆ ನಡೆದಿದೆ. ಭತ್ತದಲ್ಲಿ ಈಗಾಗಲೇ ನಾಟಿಯ ಬದಲು ಬಿತ್ತುವ ಪದ್ಧತಿ (ಡಿಎಸ್‌ಆರ್‌) ಅಳಡವಡಿಸಲಾಗಿದೆ. ಆದರೆ ಕಬ್ಬಿನ ಬೆಳೆಯಲ್ಲಿ ಸೂಕ್ಷ್ಮ­ನೀರಾವರಿ ಪದ್ಧತಿ ಅಳವಡಿಸಿದರೆ ಖರ್ಚು ದುಬಾರಿಯಾಗಲಿದೆ. ಈ ಖರ್ಚು ತಗ್ಗಿಸುವ ನಿಟ್ಟಿನಲ್ಲಿ ತಜ್ಞ­ರೊಂದಿಗೆ ಚರ್ಚೆಗಳು ನಡೆದಿವೆ’ ಎಂದರು.

‘ಕಳೆದ ನೂರಾರು ವರ್ಷಗಳಿಂದ ಮಳೆ–ಮಾರುತಗಳಿಗೆ ಅನುಗುಣವಾಗಿ ರೈತರು ಕೃಷಿ ಪದ್ಧತಿ ಅಳವಡಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎದುರಾಗಿರುವ ಹವಾಮಾನ ವೈಪರೀತ್ಯ ರೈತರನ್ನು ಕಂಗೆಡಿಸಿದೆ. ಇಂಥ ಸಂದರ್ಭದಲ್ಲಿ ನೀರಿನ ಬೇಕಾಬಿಟ್ಟಿ ಬಳಕೆ ಕುರಿತು ನೀತಿ ರೂಪಕರು ಮಾತ್ರವಲ್ಲ ದೇಶದ ಸಮಸ್ತ ನಾಗರಿಕರು ಚಿಂತನೆ ನಡೆಸಬೇಕಾಗಿದೆ. ಉಳ್ಳವರು ನೀರನ್ನು ಅತಿಯಾಗಿ ಬಳಸಿದರೆ, ಇಲ್ಲದವರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇದು ಜಾಗತಿಕ ಸಮಸ್ಯೆಯೂ ಆಗಿರುವುದ­ರಿಂದ ಈ ಕುರಿತು ಇಡೀ ಜಗತ್ತೇ ಗಂಭೀರವಾಗಿ ಚಿಂತನೆ ನಡೆಸಬೇಕಿದೆ’ ಎಂದರು.

dharwad_globalwarming