ರಾಜ್ಯದ ಕೃಷಿ ಭಾಗ್ಯ ಯೋಜನೆ ದೇಶಕ್ಕೆ ಮಾದರಿ

ಕೊಪ್ಪಳ: ರಾಜ್ಯದ ಒಣ ಬೇಸಾಯ ಅವಲಂಬಿತ ರೈತರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಕೃಷಿ ಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ನೆರೆ ಹೊರೆಯ ರಾಜ್ಯದವರೂ ಈ ಯೋಜನೆ ಅಳವಡಿಕೆಗೆ ಉತ್ಸಾಹದಲ್ಲಿದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದಲ್ಲಿ ಆ.29 ರಂದು ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿ ಸಮಾವೇಶ ನಡೆಯುವ ಸ್ಥಳವನ್ನು ಗುರುವಾರ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಒಣ ಬೇಸಾಯದ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗೆ ಸರ್ಕಾರ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಿದೆ. ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿ ರೈತರು ಆರ್ಥಿಕ ಸಬಲರಾಗಬಹುದು. ನಂತರ ಪಾಲಿಹೌಸ್‌ ಅಳವಡಿಸಿ, ಕಡಿಮೆ ನೀರು ಬಳಸಿ, ಶೇ. 30 ರಿಂದ 40 ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದರು.

ಈಗಾಗಲೆ ಕೃಷಿಭಾಗ್ಯ ಯೋಜನೆ ಜಾರಿಯಾಗಿ 2 ವರ್ಷಗಳಾಗಿದ್ದು, ರಾಜ್ಯದ 1 ಲಕ್ಷ ರೈತ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆ ಮೆಚ್ಚುಗೆ ಪಡೆದಿದೆ. ಈಗಾಗಲೆ ಈ ಯೋಜನೆಯನ್ನು ನೆರೆಯ ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳು ಅಳವಡಿಸಿಕೊಳ್ಳಲು
ಉತ್ಸಾಹದಲ್ಲಿದೆ. ಕೇಂದ್ರ ಸರ್ಕಾರವೂ ಕೂಡ ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯೋಜನೆಯ ರೂಪುರೇಷೆ ಪಡೆದಿದೆ ಎಂದರು.

ಕೃಷಿಭಾಗ್ಯ ಯೋಜನೆ ರೈತರಿಗೆ ಸಮರ್ಪಣೆಗೊಳಿಸಲು, ಈ ಯೋಜನೆಯ ಸೌಲಭ್ಯ ಪಡೆದು, ಲಾಭ ಕಂಡುಕೊಂಡಿರುವ ರೈತರು, ಇನ್ನಷ್ಟು ರೈತರಿಗೆ ಪ್ರೇರೇಪಣೆ ನೀಡಲಿ, ಪ್ರಗತಿಪರ ರೈತರು ತಮ್ಮ ತಮ್ಮ ನಡುವೆ ವಿಚಾರ ವಿನಿಮಯ
ಮಾಡಿಕೊಂಡು, ಕೃಷಿ ಕ್ಷೇತ್ರವನ್ನು ಇನ್ನಷ್ಟು ಸಬಲಗೊಳಿಸುವ ಉದ್ದೇಶಕ್ಕಾಗಿಯೇ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳನ್ನು ಒಂದೆಡೆ ಸೇರಿಸಲು ಆ. 29 ರಂದು ಕೊಪ್ಪಳದಲ್ಲಿ ವಿಶೇಷ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಅಂದು ಸುಮಾರು 25 ರಿಂದ 30 ಸಾವಿರ ರೈತ ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಕೃಷಿಭಾಗ್ಯ ಯೋಜನೆಗೆ ಸಂಬಂಧಿತ ಕಾರ್ಯಕ್ರಮಗಳನ್ನು ನೇರವಾಗಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ
ಮನವರಿಕೆ ಮಾಡಿಕೊಡಲಾಗುವುದು. ಇದಕ್ಕಾಗಿ ಈಗಾಗಲೆ ಮಾದರಿ ಕೃಷಿ ಹೊಂಡ ನಿರ್ಮಾಣ, ಭತ್ತ ನಾಟಿ ಪ್ರದೇಶವನ್ನು ಸಮಾವೇಶದ ಸ್ಥಳದಲ್ಲಿಯೇ ನಿರ್ಮಿಸಲಾಗುವುದು. ಆಧುನಿಕ ಕೃಷಿ ಯಂತ್ರೋಪಕರಣ ರೈತರಿಗೆ
ಪರಿಚಯಿಸಲಾಗುವುದು. ಫಲಾನುಭವಿಗಳ ಸಮಾವೇಶವು ಒಂದು ರೈತೋಪಯೋಗಿ ವೈವಿಧ್ಯಮಯ ಕಾರ್ಯಕ್ರಮವಾಗಿ ಮೂಡಿ ಬರಲಿದೆ ಎಂದರು.

ಸಚಿವ ಬಸವರಾಜ ರಾಯರಡ್ಡಿ ಅವರು, ರೈತ ಫಲಾನುಭವಿಗಳ ಸಮಾವೇಶಕ್ಕೆ ನಿರ್ಮಿಸಲಾಗುತ್ತಿರುವ ಬೃಹತ್‌ ವೇದಿಕೆ, ಕೃಷಿ ಹೊಂಡ ಕಾಮಗಾರಿ ಪರಿಶೀಲಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಡಿಸಿ ಎಂ. ಕನಗವಲ್ಲಿ,
ಜಿಪಂ ಸಿಇಒ ಆರ್‌. ರಾಮಚಂದ್ರನ್‌, ಎಸ್ಪಿ ಡಾ. ತ್ಯಾಗರಾಜನ್‌, ಮಾಜಿ ಶಾಸಕ ಬಸವರಾಜ ಹಿಟ್ನಾಳ್‌, ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್‌, ಅಪರ ಕೃಷಿ ನಿರ್ದೇಶಕ ಎನ್‌. ಗಂಗಪ್ಪ, ಕೃಷಿ ಆಯುಕ್ತ ಬಿ. ಪಾಂಡುರಂಗ ನಾಯಕ್‌, ಜಂಟಿ ಕೃಷಿ ನಿರ್ದೇಶಕ ಡಾ. ರಾಮದಾಸ್‌ ಇತರರು ಹಾಜರಿದ್ದರು.

http://www.udayavani.com/kannada/news/koppal–news/165853/fortune-plans-to-farming-the-land-the-state-model?utm_campaign=datomata&utm_medium=similiar&utm_source=datomata&datomata_kw=%20