ಪರ್ಯಾಯ ಬೆಳೆಗೆ ಕೃಷಿ ಅಭಿಯಾನ

ಬೆಂಗಳೂರು: ಸಂಭಾವ್ಯ ಮಳೆ ಕೊರತೆ ಎದುರಿಸಲು ರಾಜ್ಯಾದ್ಯಂತ ಪರ್ಯಾಯ ಬೆಳೆ ಹಾಗೂ ಸುಸ್ಥಿರ ಕೃಷಿಗೆ ಪ್ರೋತ್ಸಾಹಿಸಲು ‘ಕೃಷಿ ಅಭಿಯಾನ’ ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ”ಮಳೆ ಕೊರತೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಯನ್ನು ಪ್ರೋತ್ಸಾಹಿಸಲು ಕೃಷಿ ಇಲಾಖೆ ಯೋಜನೆ ರೂಪಿಸಿದೆ. ‘ಕೃಷಿ ಅಭಿಯಾನ’ದಡಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಒಂದು ತಿಂಗಳು ಕೃಷಿ, ತೋಟಗಾರಿಕೆ, ರೇಷ್ಮೆ, ಕೃಷಿ ವಿ.ವಿ ವಿಜ್ಞಾನಿಗಳು ಹಳ್ಳಿಗಳಿಗೆ ತೆರಳಿ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಪಂ ಹಾಗೂ ಹೋಬಳಿ ಮಟ್ಟದಲ್ಲಿ ಕೃಷಿ ಉತ್ಸವ ಏರ್ಪಡಿಸಲಾಗುತ್ತಿದೆ,” ಎಂದರು.

”ಮಳೆ ಕೊರತೆಯಾದಲ್ಲಿ ದೀರ್ಘಾವಧಿ ಬೆಳೆ ಬೆಳೆಯುವ ಬದಲು ಮಧ್ಯಮಾವಧಿ, ಅಲ್ಪಾವಧಿ ಬೆಳೆ ಬೆಳೆಯುವಂತೆ ರೈತರನ್ನು ಪ್ರೇರೇಪಿಸಲಾಗುತ್ತಿದೆ. ಅಲ್ಪಾವಧಿ ಬೆಳೆಗಳಾದ ರಾಗಿ, ಬಿಳಿಜೋಳ, ಸಜ್ಜೆ, ತೊಗರಿ, ಹೆಸರು, ಅಲಸಂದೆ, ಸೂರ್ಯಕಾಂತಿ ಬಿತ್ತನೆ ಬೀಜಗಳ ದಾಸ್ತಾನು ಲಭ್ಯವಿದೆ,” ಎಂದರು.

ದುಬಾರಿ ಬಿತ್ತನೆ ಬೀಜ ಜಪ್ತಿ ”ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಏಕಾಏಕಿ ಶೇಂಗಾ, ಹೆಸರು ಬಿತ್ತನೆ ಬೀಜಕ್ಕೆ ಬೇಡಿಕೆ ಉಂಟಾಯಿತು. ಅವಕಾಶ ದುರ್ಬಳಕೆ ಮಾಡಿಕೊಂಡ ಬಿತ್ತನೆ ಬೀಜ ಮಾರಾಟಗಾರರು, ಹೆಚ್ಚುವರಿ ಬೆಲೆಗೆ ಮಾರಲಾರಂಭಿಸಿದ್ದರು. ದೂರು ಬಂದ ತಕ್ಷಣ ಕೃಷಿ ಇಲಾಖೆ ಅಧಿಕಾರಿಗಳು ಅಂತಹ ಮಳಿಗೆಗಳ ಮೇಲೆ ದಾಳಿ ನಡೆಸಿ ಬಿತ್ತನೆ ಬೀಜ ಜಪ್ತಿ ಮಾಡಿದ್ದಾರೆ. ಮುಟ್ಟುಗೋಲು ಹಾಕಿಕೊಂಡ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತಿದೆ,” ಎಂದರು.

ಮಳೆ ಕೊರತೆ ಆತಂಕ ಬೇಡ ”ಭಾರತೀಯ ಹವಾಮಾನ ಇಲಾಖೆ ಮಳೆ ಕೊರತೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆದರೆ ಸ್ಕೈಮೇಟ್ ಹಾಗೂ ಸಾಸ್ಕಾಮ್ ಎಂಬ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ಪ್ರಕಾರ ವಾಡಿಕೆಯಷ್ಟು ಅಥವಾ ಸುಧಾರಿತ ಮಳೆಯಾಗಲಿದೆ. ಮಳೆಯ ಪ್ರಮಾಣವನ್ನು 10-15 ದಿನ ಮುಂಚಿತವಾಗಿ ನಿಖರವಾಗಿ ಹೇಳಬಹುದೇ ವಿನಃ ದೀರ್ಘಾವಧಿಯ ಮಳೆ ಪ್ರಮಾಣವನ್ನು ಕರಾರುವಾಕ್ಕಾಗಿ ಹೇಳುವ ವೈಜ್ಞಾನಿಕ ವಿಧಾನ ಇಲ್ಲ. ಇದನ್ನು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ರೈತರು ಆತಂಕಕ್ಕೆ ಒಳಗಾಗುವುದು ಬೇಡ,” ಎಂದು ಕೃಷ್ಣ ಬೈರೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಉಮಾ ಮಹದೇವನ್, ಆಯುಕ್ತ ಪಾಂಡುರಂಗನಾಯಕ್ ಉಪಸ್ಥಿತರಿದ್ದರು.

ಕೃಷಿ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಕೃಷಿ ಇಲಾಖೆಯ ಎಲ್ಲಾ ಯೋಜನೆ, ಸಹಾಯಧನ ಯಾವುದೇ ರಾಜಕೀಯ ಪ್ರಭಾವ ಇಲ್ಲದೇ ನೇರವಾಗಿ ರೈತ ಸಮುದಾಯಕ್ಕೆ ತಲುಪುವಂತಾಗಲು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

”ಅನಕ್ಷರಸ್ಥರೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಮಾಹಿತಿ ನೀಡಿದರೆ, ಅಲ್ಲಿರುವ ಕಂಪ್ಯೂಟರ್‌ನಲ್ಲಿಯೇ ಅರ್ಜಿಯನ್ನು ಅಪ್‌ಲೋಡ್ ಮಾಡಲಾಗುವುದು. ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು,” ಎಂದರು.

Read it at http://vijaykarnataka.indiatimes.com/state/karnataka/Alternative-crop-cultivation-campaign/articleshow/47649058.cms