ಅವರು ಬೈರೇಗೌಡ, ಇವರು ‘ಕೃಷ್ಣ’!

ಬೆಳಗಾವಿ: ಕೃಷಿ ಸಚಿವ ಕೃಷ್ಣ ಬೈರೇಗೌಡ ತಮ್ಮ ಇಲಾಖೆ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಎರಡು ತಲೆಮಾರುಗಳ ಬಗೆಗಿನ ಚರ್ಚೆಯೂ ನಡೆಯಿತು.

‘ನಿಮ್ಮ ತಂದೆ ಬೈರೇಗೌಡರು ಕೃಷಿ ಸಚಿವರಾಗಿದ್ದರು. ನೀವೂ ಈಗ ಅದೇ ಇಲಾಖೆಯ ಜವಾಬ್ದಾರಿ ಹೊತ್ತಿದ್ದೀರಿ. ಹಾಗಾಗಿ ನಮಗೆ ನಿಮ್ಮಿಂದ ಹೆಚ್ಚಿನ ನಿರೀಕ್ಷೆ ಇದೆ’ ಎಂದು ಬಿಜೆಪಿಯ ಡಿ.ಎನ್. ಜೀವರಾಜ್ ಸಚಿವರನ್ನು ಉದ್ದೇಶಿಸಿ ಹೇಳಿದರು. ತಮ್ಮ ಭಾಗದ ಅಡಿಕೆ ಬೆಳೆಗಾರರ ಕೆಲವು ಬೇಡಿಕೆ ಈಡೇರಿಸುವಂತೆ ಕೋರಿದರು.

ಕೃಷ್ಣ ಬೈರೇಗೌಡರು ಇದಕ್ಕೆ ಪ್ರತಿಕ್ರಿಯೆ ನೀಡುವ ಮುನ್ನವೇ ಮಧ್ಯಪ್ರವೇಶಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ‘ಅವರ ತಂದೆ ಬೈರೇಗೌಡ ವೇಮಗಲ್ ನವರು. ಕೃಷ್ಣ ಅಮೆರಿಕದಲ್ಲಿ ಓದಿ ಬಂದವರು. ಬೈರೇಗೌಡರು ರೈತರ ನಡುವಿನಿಂದ ಬಂದವರು. ಕೃಷ್ಣ ಬೆಂಗಳೂರಿನಿಂದ ಬಂದವರು’ ಎಂದರು.

ಬಿಜೆಪಿಯ ಗೋವಿಂದ ಕಾರಜೋಳ, ‘ಬೈರೇಗೌಡರು ಸಚಿವರಾಗಿದ್ದಾಗ ವಿಜಾಪುರಕ್ಕೆ ಬಂದಿದ್ದರು. ಆಗ ಜಿಲ್ಲೆ ವಿಭಜನೆಯಾಗಿರಲಿಲ್ಲ. ನಾನು ಶಾಸಕನಾಗಿದ್ದೆ. ಪ್ರವಾಸಿ ಮಂದಿರದಲ್ಲಿ ಚಹಾ ಸೇವಿಸಿ, ತಮಗೆ ಅರ್ಧ ಗಂಟೆ ಕೆಲಸವಿದೆ; ನಂತರ ಬಾ ಎಂದು ಹೇಳಿ ನನ್ನನ್ನು ಕಳುಹಿಸಿ, ನನ್ನ ಕ್ಷೇತ್ರಕ್ಕೆ ಹೋಗಿದ್ದರು. ನನ್ನ ಕ್ಷೇತ್ರದ ಕೆಲವರು ಫೋನ್ ಮಾಡಿ ಬೈರೇಗೌಡರು ಬಂದಿರುವ ವಿಷಯ ತಿಳಿಸಿದರು. ಅಲ್ಲಿ ಇಲಾಖೆಯ ಸಿಬ್ಬಂದಿಯೊಬ್ಬನನ್ನು ಅಮಾನತು ಮಾಡಿ ಅವರು ವಿಜಾಪುರಕ್ಕೆ ಹಿಂತಿರುಗಿದರು. ನಾನು ಅವರನ್ನು, ನನ್ನ ಕ್ಷೇತ್ರಕ್ಕೆ ಹೋಗಿದ್ದೀರಂತೆ ಎಂದಾಗ, ನೀನು ಬಂದಿದ್ದರೆ ಅವನನ್ನು ಅಮಾನತು ಮಾಡಲಾಗುತ್ತಿತ್ತಾ? ಎಂದರು. ಇದು ಅವರ ಕಾರ್ಯಶೈಲಿಯಾಗಿತ್ತು’ ಎಂದು ಸ್ಮರಿಸಿಕೊಂಡರು.

ನನಗೂ ಇದೆ ಅನುಭವ: ‘ನನಗೂ ರೈತರ ಬದುಕು ಗೊತ್ತು. ತಾವು ಮಣ್ಣಿನ ಮಕ್ಕಳು ಅಂತ ಹೇಳಿಕೊಳ್ಳುವುದೇ ಕೆಲವರಿಗೆ ಉದ್ಯೋಗ ಆಗಿದೆ. ಆದರೆ, ನಾನು ಅಂಥವನಲ್ಲ. ಶಿಕಾರಿಪುರದಲ್ಲಿ ಪ್ರವಾಸದ ಸಂದರ್ಭದಲ್ಲಿ ನಾನು ಕೂಡ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಿದ್ದೆ. ನಾನು ಪ್ರಚಾರ ಬಯಸಲ್ಲ. ಆದರೆ ನನ್ನ ತಂದೆಯ ಹೋರಾಟದ ಅನುಭವ ನನಗಿಲ್ಲ’ ಎಂದು ಕೃಷ್ಣ ಹಾಸ್ಯದ ಧಾಟಿಯಲ್ಲಿ ಉತ್ತರಿಸಿದರು.
ಬಿಜೆಪಿಯ ಬಿ.ವೈ.ರಾಘವೇಂದ್ರ, ‘ಶಿಕಾರಿಪುರ ಉಲ್ಲೇಖಿಸಿದ್ದು ಏಕೆ’ ಎಂದಾಗ, ‘ಅದು ದೊಡ್ಡವರ ಕ್ಷೇತ್ರ ಅದಕ್ಕೆ’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ಸಿನ ಬಸವರಾಜ ರಾಯರೆಡ್ಡಿ, ತಂದೆ ಮತ್ತು ಮಗನಿಗೆ ‘ಕೃಷ್ಣ’ ಮತ್ತು ‘ಬೈರೇಗೌಡ’ರಿಗೆ ಇರುವಷ್ಟೇ ವ್ಯತ್ಯಾಸ ಇದೆ ಎಂದು, ಚರ್ಚೆಗೆ ತೆರೆ ಎಳೆದರು.

 

http://www.prajavani.net/article/%E0%B2%85%E0%B2%B5%E0%B2%B0%E0%B3%81-%E0%B2%AC%E0%B3%88%E0%B2%B0%E0%B3%87%E0%B2%97%E0%B3%8C%E0%B2%A1-%E0%B2%87%E0%B2%B5%E0%B2%B0%E0%B3%81-%E0%B2%95%E0%B3%83%E0%B2%B7%E0%B3%8D%E0%B2%A3