ನೀರಿನ ಟ್ಯಾಂಕರ್‌ ಬಾಕಿ ತಕ್ಷಣ ಪಾವತಿಸಿ

ಬೆಂಗಳೂರು: ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‌ ಮಾಲೀಕರಿಗೆ ತಕ್ಷಣ ಹಣ ಬಿಡುಗಡೆ ಮಾಡಲು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ವಲಯದ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಸಚಿವರು ಈ ಆದೇಶ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ರಮೇಶಕುಮಾರ್,  ಎಚ್‌.ಸಿ.ಬಾಲಕೃಷ್ಣ, ಎಂ.ಕೃಷ್ಣಾರೆಡ್ಡಿ, ಎಸ್‌.ಎನ್‌.ಸುಬ್ಬಾರೆಡ್ಡಿ, ಎಂ.ರಾಜಣ್ಣ, ಕೆ.ಎಸ್‌.ಮಂಜುನಾಥ ಗೌಡ ಮತ್ತಿತರರು, ನೀರು ಸರಬರಾಜು ಮಾಡಿದ ಟ್ಯಾಂಕರ್‌ ಮಾಲೀಕರಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

‘ಹಲವು ತಿಂಗಳ ಬಾಕಿ ಕೊಡದ ಕಾರಣ ಟ್ಯಾಂಕರ್ ಮಾಲೀಕರು ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದ ಕುಡಿಯುವ ನೀರಿಗೆ ಬಹಳ ತೊಂದರೆ ಆಗಿದೆ. ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಹಣ ಕೊಡಿಸಬೇಕು’ ಎಂದು ಆಗ್ರಹಪಡಿಸಿದರು.
ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ, ‘ಟ್ಯಾಂಕರ್‌ಗಳ ವಿಷಯ ನನಗೂ ಗೊತ್ತಿದೆ. ಹಣ ಬಾಕಿ ಉಳಿಸಿಕೊಳ್ಳಲು ಕಾರಣ ಏನು? ಕೊಡುವುದಕ್ಕೆ ಕಷ್ಟ ಏನು’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ತಕ್ಷಣ ಪರಿಶೀಲಿಸಿ, ಹಣ ಕೊಡಬೇಕು. ಶಾಸಕರ ನೇತೃತ್ವದ ಕಾರ್ಯಪಡೆಗಳು ಟ್ಯಾಂಕರ್‌  ಮಾಲೀಕರಿಗೆ ಹಣ ನೀಡುವಂತೆ ಶಿಫಾರಸು ಮಾಡಿದರೂ ಏಕೆ ಹಣ ನೀಡುತ್ತಿಲ್ಲ. ಕೆಲವು ಕಡೆ ನಕಲಿ ಬಿಲ್‌ ಹಾವಳಿ ಇದ್ದು, ಅದನ್ನು ಖುದ್ದು ಭೇಟಿ ಮಾಡಿ ಪರಿಶೀಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸುವ ಪಿ.ಡಿ.ಓ.ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾಧಿಕಾರಿಗಳು ಕ್ಷೇತ್ರ ಪ್ರವಾಸ ಸಂದರ್ಭದಲ್ಲಿ ಇಂತಹ ಸಮಸ್ಯೆಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರಮೇಶಕುಮಾರ್‌ ಆಗ್ರಹಪಡಿಸಿದರು.

ಬರಕ್ಕೂ ಆದ್ಯತೆ ಕೊಡಿ: ಅತಿವೃಷ್ಟಿಯಿಂದ ಪ್ರವಾಹ ಬಂದಾಗ ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳುವ ಸರ್ಕಾರ ಬರದ ವಿಷಯದಲ್ಲಿ ಏಕೆ ಅದೇ ಉತ್ಸಾಹ ತೋರಿಸುವುದಿಲ್ಲ? ಬರ ಕೂಡ ನೈಸರ್ಗಿಕ ವಿಕೋಪ. ಅದರಿಂದಲೂ ಜನರಿಗೆ ತೊಂದರೆ ಆಗುತ್ತದೆ ಎನ್ನುವ ಭಾವನೆ ಸರ್ಕಾರಕ್ಕೆ ಏಕ್ಕಿಲ್ಲ ಎಂದು ಪ್ರಶ್ನಿಸಿದರು.

‘ಶಾಸಕರ ನೇತೃತ್ವದ ಕಾರ್ಯಪಡೆ ಒಂದು ರೀತಿಯ ಹಳೆ ವ್ಯವಸ್ಥೆ. ಅದರ ಬದಲಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಬೇಕು. ಅವುಗಳು ವಾರಕ್ಕೊಮ್ಮೆ ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಆಗಬೇಕು’ ಎಂದು ಅವರು ಸಲಹೆ ನೀಡಿದರು.

ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯೆ ನೀಡಿ, ‘ಅಧಿಕಾರಿಗಳು ವಾರಕ್ಕೊಮ್ಮೆ ಸಭೆ ಸೇರಿ ಬರ ಪರಿಸ್ಥಿತಿ ಅವಲೋಕಿಸಬೇಕು’ ಎಂದು ಸೂಚಿಸಿದರು.

ಬಾಡಿಗೆಗೆ ಕೊಳವೆಬಾವಿ
‘ಟ್ಯಾಂಕರ್ ಲೆಕ್ಕದಲ್ಲಿ ನೀರು ಖರೀದಿಸುವುದಕ್ಕಿಂತ ರೈತರ ಕೊಳವೆ ಬಾವಿಗಳನ್ನೇ ಬಾಡಿಗೆಗೆ ಪಡೆದು, ಗ್ರಾಮಗಳಿಗೆ ಸರಬರಾಜು ಮಾಡುವುದು ಸೂಕ್ತ.  ತಿಂಗಳಿಗೆ ಇಂತಿಷ್ಟು ಎಂದು ಬಾಡಿಗೆ ನಿಗದಿಪಡಿಸಿ. ಈಗ ₹ 10 ಸಾವಿರ ಬಾಡಿಗೆ ನಿಗದಿ ಮಾಡಿದ್ದು, ಅದನ್ನು ಇನ್ನೂ ಹೆಚ್ಚಿಸುವ ಬಗ್ಗೆ ಪರಿಶೀಲಿಸುವಂತೆ  ಸಚಿವ ಕೃಷ್ಣಬೈರೇಗೌಡ  ಅಧಿಕಾರಿಗಳಿಗೆ ಸೂಚಿಸಿದರು.  ಕೆಲವು ಶಾಸಕರು, ಕನಿಷ್ಠ ₹ 25 ಸಾವಿರ ಬಾಡಿಗೆ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

http://www.prajavani.net/article/%E0%B2%A8%E0%B3%80%E0%B2%B0%E0%B2%BF%E0%B2%A8-%E0%B2%9F%E0%B3%8D%E0%B2%AF%E0%B2%BE%E0%B2%82%E0%B2%95%E0%B2%B0%E0%B3%8D%E2%80%8C-%E0%B2%AC%E0%B2%BE%E0%B2%95%E0%B2%BF-%E0%B2%A4%E0%B2%95%E0%B3%8D%E0%B2%B7%E0%B2%A3-%E0%B2%AA%E0%B2%BE%E0%B2%B5%E0%B2%A4%E0%B2%BF%E0%B2%B8%E0%B2%BF